ಕ್ರೀಟ್ ಇತಿಹಾಸ 

	ಕ್ರೀಟಿನ ಪ್ರಾಚೀನ ನಾಗರಿಕತೆ ನಾಶವಾದ ಮೇಲೆ ಹಲವು ಶತಮಾನಗಳ ಕಾಲ ಕ್ರೀಟ್ ದ್ವೀಪದಲ್ಲಿ ಅಷ್ಟು ಉತ್ಕøಷ್ಟವಾದ ಸಂಸ್ಕøತಿ ಪ್ರಚಾರಕ್ಕೆ ಬರಲಿಲ್ಲ. ನೂರಾರು ವರ್ಷಗಳ ಅನಂತರ ಕ್ರೀಟ್ ನಿವಾಸಿಗಳು ಗ್ರೀಸ್, ಏಷ್ಯ ಮೈನರ್ ಮತ್ತು ಇತರ ಪ್ರದೇಶಗಳೊಡನೆ ವಾಣಿಜ್ಯ ಸಂಪರ್ಕವನ್ನು ಕಲ್ಪಿಸಿಕೊಂಡರು. ಜನಸಂಖ್ಯೆ ಕ್ರಮೇಣ ಹೆಚ್ಚುತ್ತ ಬಂತು. ಪಟ್ಟಣಗಳೂ ನಗರಗಳೂ ಬೆಳೆಯಲಾರಂಭಿಸಿದುವು. ಧಾರ್ಮಿಕ ಕೇಂದ್ರಗಳಾಗಿದ್ದ ಹಲವು ನಗರಗಳಲ್ಲಿ ಸುಂದರ ದೇವಾಲಯಗಳನ್ನು ನಿರ್ಮಿಸಲಾಯಿತು. ಆದರೂ ಆ ಕಾಲದಲ್ಲಿ ಕಟ್ಟಿದ್ದ ದೇವಮಂದಿರಗಳೂ ಕೆತ್ತಲಾದ ಕಲೆಯೂ ಪ್ರಾಕ್ಚಾರಿತ್ರಿಕ ಯುಗದ ಕಟ್ಟಡಗಳಂತೆ ಭವ್ಯವಾಗಿರಲಿಲ್ಲ. ಐತಿಹಾಸಿಕ ಯುಗದ ಪ್ರಾರಂಭದಿಂದಲೂ ಕ್ರೀಟ್ ದ್ವೀಪ ಗ್ರೀಕ್ ಭೂಭಾಗದೊಡನೆ ಹೆಚ್ಚು ಸಂಪರ್ಕ ಬೆಳೆಸಲಿಲ್ಲ. ಪೆಲೊಪೊನೀಷಿಯನ್ ಯುದ್ಧಗಳಲ್ಲೂ ಕ್ರೀಟ್ ಜನ ಭಾಗವಹಿಸಲಿಲ್ಲ. ಆಗಾಗ ಗ್ರೀಕ್ ನಗರರಾಜ್ಯಗಳಿಂದ ಸಂಭವಿಸುತ್ತಿದ್ದ ಉಪದ್ರವಗಳನ್ನು ತಡೆಗಟ್ಟಲು ಕ್ರೀಟ್ ದ್ವೀಪದ ತೀರಪ್ರದೇಶದ ನಗರಗಳಿಗೆ ಕೋಟೆಗಳನ್ನು ಕಟ್ಟಿದ್ದರು. ಕ್ರಿ.ಪೂ. 67ರಲ್ಲಿ ಕ್ರೀಟ್ ರೋಮನರ ಆಕ್ರಮಣಕ್ಕೊಳಗಾಗಿ ಆ ಸಾಮ್ರಾಜ್ಯದ ಭಾಗವಾಯಿತು. ಕ್ರೀಟ್ ದ್ವೀಪ ಸಿರಿಯ, ಈಜಿಪ್ಟ್ ಮೊದಲಾದ ಪ್ರದೇಶಗಳಿಗೆ ಹೋಗಿ ಬರುವ ಜಲಮಾರ್ಗದಲ್ಲಿದ್ದರಿಂದ ರೋಮನ್ ಸಾಮ್ರಾಜ್ಯದ ಮುಖ್ಯ ಭಾಗಗಳಲ್ಲೊಂದೆಂದು ಪರಿಗಣಿತವಾಗಿತ್ತು. ಆ ಕಾಲದಲ್ಲಿ ಕ್ರೀಟ್ ದ್ವೀಪದಲ್ಲಿ ಅನೇಕ ಸುಂದರ ದೇವಾಲಯಗಳೂ ರಂಗಮಂದಿರಗಳೂ ಸಾರ್ವಜನಿಕ ರಸ್ತೆಗಳೂ ನಿರ್ಮಿತವಾದುವು. ರೋಮನರ ಆಕ್ರಮಣ ಕಾಲದಿಂದ 9ನೆಯ ಶತಮಾನದ ಪ್ರಾರಂಭದಲ್ಲಿ ಬಿeóÁಂಟಿನ್ ಸಾಮ್ರಾಜ್ಯ ಅರಬರ ಆಕ್ರಮಣಕ್ಕೆ ಒಳಗಾಗುವವರೆಗೆ ಕ್ರೀಟ್ ಶಾಂತಿಸಮೃದ್ಧಿಗಳ ಬೀಡಾಗಿತ್ತು.

	826ರಲ್ಲಿ ಕ್ರೀಟ್ ಸ್ಪೇನಿನಿಂದ ಹೊರದೂಡಲಾದ ಅರಬರ ಆಡಳಿತಕ್ಕೊಳಪಟ್ಟಿತು. ಕಡಲುಗಳ್ಳರ ನೆಲೆಯಾಗಿದ್ದ ಕ್ರೀಟ್ ದ್ವೀಪವನ್ನು 960ರಲ್ಲಿ ಬಿeóÁಂಟಿನ್ ಚಕ್ರವರ್ತಿ 2ನೆಯ ನೈಸಿಫೋರಸ್ ಫೋಕಾಸ್ ವಶಪಡಿಸಿಕೊಂಡ. ಮತೀಯ ಯುದ್ಧಗಳ ಕಾಲದಲ್ಲಿ ಅದು ಅರಬರ ಆಳ್ವಿಕೆಯಿಂದ ವಿಮೋಚನೆಗೊಂಡು ಕ್ರಮೇಣ ವೆನಿಸಿಗೆ ಸೇರಿ ಸು.4 ಶತಮಾನಗಳ ಕಾಲ ಅದರ ಆಳ್ವಿಕೆಗೊಳಪಟ್ಟಿತು. ಕ್ಯಾಂಡಿಯ ಕ್ರೀಟಿನ ರಾಜಧಾನಿಯಾಯಿತು. ಆ ಕಾಲದಲ್ಲಿ ವ್ಯಾಪಾರ, ಕೈಗಾರಿಕೆ ವ್ಯವಸಾಯ ಮುಂತಾದವು ವಿಶೇಷ ಅಭಿವೃದ್ಧಿ ಹೊಂದಿ ಕ್ರೀಟ್ ಸಂಪದ್ಭರಿತ ನಾಡಾಗಿತ್ತು. ಆದರೆ ಕ್ರೀಟ್ ಜನರಿಗೂ ವೆನಿಸಿನ ಆಡಳಿತವರ್ಗಕ್ಕೂ ಆಗಾಗ ಘರ್ಷಣೆಗಳು ಸಂಭವಿಸುತ್ತಿದ್ದುವು. ವೆನಿಸ್ ಆಡಳಿತದಿಂದ ಬೇಸರಗೊಂಡ ಕ್ರೀಟ್ ಜನ 1207ರಿಂದ 1365ರ ಮಧ್ಯೆ 14 ಬಾರಿ ದಂಗೆಯೆದ್ದರು. ಕ್ರಮೇಣ ತುರ್ಕಿಯನ್ನು ಆಶ್ರಯಿಸಿದರು. ಆದರೆ ಮೊದಲಿಗೆ ಕ್ರೀಟ್ ಬಗ್ಗೆ ವಿಮುಖರಾಗಿದ್ದ ತುರ್ಕರು 1645ರಲ್ಲಿ ಕ್ರೀಟಿನ ಬಹು ಭಾಗವನ್ನು ವಶಪಡಿಸಿಕೊಂಡರು. 1715ರಲ್ಲಿ ಕ್ರೀಟ್ ಪೂರ್ಣವಾಗಿ ತುರ್ಕರ ವಶವಾಯಿತು. ಆಟೋಮನ್ ಸಂತತಿಯ ಆಳ್ವಿಕೆಯಲ್ಲಿ ಕ್ರೀಟ್ ದ್ವೀಪದಲ್ಲಿ ಇಸ್ಲಾಂ ಮತ ಪ್ರಸಾರವಾಯಿತು. ಇಸ್ಲಾಂ ಮತಕ್ಕೆ ಪರಿವರ್ತನೆಗೊಂಡ ಬಹುಸಂಖ್ಯಾತ ಕ್ರೀಟ್ ನಿವಾಸಿಗಳು ಆಡಳಿತದಲ್ಲಿ ಪ್ರಾಮುಖ್ಯಕ್ಕೆ ಬಂದರು. ಆದರೂ ಸರ್ಕಾರ ಜನಹಿತಕ್ಕೆ ಅನುಗುಣವಾಗಿರಲಿಲ್ಲ. ಆದ್ದರಿಂದ ಪದೇ ಪದೇ ದಂಗೆಗಳು ನಡೆಯುತ್ತಿದ್ದುವು. ಅವುಗಳಲ್ಲಿ 1813ರಲ್ಲಿ ನಡೆದ ದಂಗೆ ಮುಖ್ಯವಾದ್ದು. ಅಲ್ಲಿ ಗವರ್ನರ್-ಜನರಲ್ ಆಗಿದ್ದ ಹಾಜಿ ಉಸ್ಮಾನ್À ದಂಗೆಯನ್ನಡಗಿಸಿ ಅದರ ಮುಖಂಡನನ್ನು ಉಗ್ರವಾಗಿ ಶಿಕ್ಷಿಸಿದ. ಪುನಃ 1821ರಲ್ಲಿ ಉಗ್ರವಾದ ದಂಗೆಯುಂಟಾಯಿತು. ತುರ್ಕಿ ಸುಲ್ತಾನನ ವಿನಂತಿಯ ಮೇರೆಗೆ ಈಜಿಪ್ಟಿನ ಮಹಮ್ಮದಾಲಿ ಈ ದಂಗೆಯನ್ನಡಗಿಸಿದ. ಕೊನೆಗೆ 1832ರಲ್ಲಿ ಕ್ರೀಟ್ ದ್ವೀಪದ ಆಡಳಿತಾಧಿಕಾರಿಯಾಗಿ ಮುಸ್ತಾಫಾ ಪಾಷಾನನ್ನು ನೇಮಿಸಲಾಯಿತು. 1832ರಿಂದ 1852ರ ವರೆಗೆ ಈತ ಆಳಿದ. ಈ ಕಾಲ ಕ್ರೀಟ್ ದ್ವೀಪದ ಇತಿಹಾಸದ ಸುವರ್ಣಯುಗವೆಂದು ಪರಿಗಣಿತವಾಗಿದೆ. ಈ ಕಾಲದಲ್ಲಿ ವ್ಯವಸಾಯ ಅಭಿವೃದ್ಧಿ ಹೊಂದಿತು. ರಸ್ತೆಗಳು ನಿರ್ಮಾಣವಾದುವು. ಸಮಾಜದಲ್ಲಿ ಸಮೃದ್ಧಿಯುಂಟಾಯಿತು. ಅನಂತರ ಕ್ರೀಟ್ ದ್ವೀಪದಲ್ಲಿ ಅಶಾಂತಿಯೂ ಸರ್ಕಾರದ ವಿರುದ್ದ ಕ್ರಾಂತಿಗಳೂ ನಡೆದುವು. 1868ರಲ್ಲಿ ಸುಲ್ತಾನ ಹಲವು ಸುಧಾರಣೆಗಳನ್ನು ಜಾರಿಗೆ ತಂದ. ಆದರೆ ಈ ಸುಧಾರಣೆಗಳು ತೃಪ್ತಿಕರವಾಗಿರಲಿಲ್ಲ. 1878ರಲ್ಲಿ ಪುನಃ ಕ್ರಾಂತಿಯುಂಟಾಯಿತು. ಗ್ರೇಟ್ ಬ್ರಿಟನಿನ ಸಲಹೆಯ ಮೇರೆಗೆ ತುರ್ಕಿಯ ಸುಲ್ತಾನ ಮತ್ತೊಂದು ಸಂವಿಧಾನಾತ್ಮಕ ಸುಧಾರಣೆಯನ್ನು ಜಾರಿಗೆ ತಂದ. ಇದರ ಪ್ರಕಾರ 49 ಕ್ರೈಸ್ತ ಮುಖಂಡರು ಹಾಗೂ 31 ಮಂದಿ ಮಹಮದೀಯ ಸದಸ್ಯರಿಂದ ಕೂಡಿದ ವಿಧಾಯಕ ಸಭೆ ಅಸ್ತಿತ್ವಕ್ಕೆ ಬಂತು. ಕ್ರೈಸ್ತರಿಗೂ ಮಹಮ್ಮದೀಯರಿಗೂ ವಿರಸ ಬೆಳೆದು, ಕ್ರಮೇಣ ಮತೀಯ ಗಲಭೆಗಳುಂಟಾದುವು. ಅಶಾಂತ ವಾತಾವರಣವನ್ನು ಹೋಗಲಾಡಿಸಲು 1894 ಮತ್ತು 1895ರಲ್ಲಿ ಮಾಡಿದ ಪ್ರಯತ್ನಗಳು ವಿಫಲವಾಗಿ 1897ರಲ್ಲಿ ಮತ್ತೆ ಪರಿಸ್ಥಿತಿ ಹದಗೆಟ್ಟಿತ್ತು. ಅದನ್ನು ದಮನ ಮಾಡಲು ಸೈನ್ಯವನ್ನು ಕಳುಹಿಸಲಾಯಿತು. ಕ್ರೀಟ್ ನಿವಾಸಿಗಳ ಸಂಕಷ್ಟವನ್ನು ಗಮನಿಸಿದ ಐರೋಪ್ಯ ರಾಷ್ಟ್ರಗಳು ಸುಲ್ತಾನನ ಕಾರ್ಯವನ್ನು ಖಂಡಿಸಿ ಸಂಧಾನಮಾರ್ಗದಿಂದ ಜನರ ಅಸಂತುಷ್ಟಿಯನ್ನು ನಿವಾರಿಸುವಂತೆ ಮನವಿ ಮಾಡಿದುವು. ಸುಲ್ತಾನ ಸೈನ್ಯವನ್ನು ಹಿಂದಕ್ಕೆ ಕರೆಸಿ ಒಬ್ಬ ಕ್ರೈಸ್ತ ಗವರ್ನರ್-ಜನರಲನನ್ನು ಅಲ್ಲಿಗೆ ನೇಮಿಸಿದ.

	ಆದರೆ ಅಶಾಂತಿ ಮುಂದುವರಿಯಿತು. ಹೊಸದಾಗಿ ಅಧಿಕಾರ ವಹಿಸಿದ ಆಡಳಿತ ವರ್ಗ ಸುಧಾರಣೆಗಳನ್ನು ಜಾರಿಗೆ ತರುವ ಸ್ಥಿತಿಯಲ್ಲಿರಲಿಲ್ಲ. ಕ್ರೈಸ್ತ ಮತ್ತು ಮಹಮ್ಮದೀಯ ಪಂಗಡಗಳು ಪರಸ್ಪರ ಸಂಶಯದಿಂದ ನೋಡತೊಡಗಿದವು. ಗ್ರೀಕರು ಕ್ರೀಟ್ ದ್ವೀಪದ ಕ್ರೈಸ್ತರ ಸಹಾಯಕ್ಕೆ ಧಾವಿಸಿದರು. ಕ್ಯಾನೇ ಮೊದಲಾದ ಪಟ್ಟಣಗಳಲ್ಲಿ ಭೀಕರ ಮತೀಯ ಜ್ವಾಲೆ ಹರಡಿತು. ಅನೇಕ ಮಂದಿ ಮಹಮ್ಮದೀಯರು ಮರಣ ಹೊಂದಿದರು. ಗ್ರೀಕ್ ಸೈನ್ಯಗಳು ಕ್ರೀಟ್ ದ್ವೀಪವನ್ನು ಹೊಕ್ಕುವು. ಕ್ರೀಟ್ ದ್ವೀಪ ಗ್ರೀಸಿನ ಭಾಗವೆಂದು ಘೋಷಿಸಲಾಯಿತು. ಆದರೆ ಐರೊಪ್ಯ ರಾಷ್ಟ್ರಗಳು ಈ ಘೋಷಣೆಗೆ ಮನ್ನಣೆ ನೀಡಲಿಲ್ಲ. ಕ್ರೀಟ್ ದ್ವೀಪ ಹೆಸರಿಗೆ ಮಾತ್ರ ತುರ್ಕಿ ಸುಲ್ತಾನನ ಅಧೀನದಲ್ಲಿದ್ದು, ಸ್ವಾತಂತ್ರ್ಯ ಹೊಂದಿರತಕ್ಕದ್ದೆಂದು ನಿರ್ಣಯಿಸಲಾಯಿತು. 1898ರಲ್ಲಿ ತುರ್ಕಿ ಸೈನ್ಯವನ್ನು ಕ್ರೀಟ್ ದ್ವೀಪÀದಿಂದ ಪೂರ್ಣವಾಗಿ ಹಿಂದಕ್ಕೆ ಕರೆಸಿಕೊಳ್ಳಲಾಯಿತು. ಅಯೋನಸ್ ಸ್ಫಾಕಿಯಾನಾಕಿಸ್‍ನ ಅಧ್ಯಕ್ಷತೆಯಲ್ಲಿ ಕ್ರೀಟ್ ಸರ್ಕಾರ ರಚಿತವಾಯಿತು.

	ಕ್ರೀಟ್ ದ್ವೀಪವನ್ನು ಗ್ರೀಸ್ ರಾಷ್ಟ್ರದೊಂದಿಗೆ ವಿಲೀನಗೊಳಿಸುವ ಪ್ರಯತ್ನಗಳು ನಡೆಯುತ್ತಲೇ ಇದ್ದವು. ಆದರೆ ಅದರಿಂದ ತಮ್ಮ ವ್ಯಾಪಾರಾಭಿವೃದ್ಧಿಗೆ ತೊಂದರೆಯುಂಟಾಗುವುದೆಂದು ಐರೋಪ್ಯ ರಾಷ್ಟ್ರಗಳು ವಿಲೀನ ಪ್ರಯತ್ನಗಳನ್ನು ವಿರೋಧಿಸಿದುವು. ಅಲ್ಲದೆ ಅಲ್ಲಿಯ ಮಹಮ್ಮದೀಯರು ಅಷ್ಟಾಗಿ ಗ್ರೀಸಿನೊಡನೆ ವಿಲೀನವನ್ನು ಪುರಸ್ಕರಿಸಲಿಲ್ಲ. 1908ರಲ್ಲಿ ಮತ್ತೊಂದು ಸಾರಿ ವಿಲೀನಕ್ಕೆ ಪ್ರಯತ್ನಗಳು ನಡೆದುವು. ಆದರೆ ಫಲಕಾರಿಯಾಗಲಿಲ್ಲ. ಕೊನೆಗೆ 1912ರಲ್ಲಿ ಬಾಲ್ಕನ್ ಯುದ್ಧಗಳು ಪ್ರಾರಂಭವಾದಾಗ ಯೂರೋಪಿನ ಆಸಕ್ತ ರಾಷ್ಟ್ರಗಳ ಗಮನ ಆ ಕಡೆಗೆ ಹರಿಯಿತು. ಗ್ರೀಕ್ ಪ್ರಧಾನಿ ಕ್ರೀಟ್ ಮುಖಂಡರನ್ನು ಗ್ರೀಸಿನ ಪ್ರತಿನಿಧಿ ಸಭೆಗೆ ಆಹ್ವಾನಿಸಿದ. ಕ್ರೀಟ್ ದ್ವೀಪ ಗ್ರೀಸ್ ರಾಷ್ಟ್ರದೊಡನೆ ಸರಿಸುಮಾರಾಗಿ ವಿಲೀನವಾದಂತಾಯಿತು. 1913ರ ಲಂಡನ್ ಒಪ್ಪಂದದ ಪ್ರಕಾರ ಕ್ರೀಟ್ ಗ್ರೀಸಿನ ಭಾಗವೆಂದು ಮನ್ನಣೆ ಪಡೆಯಿತು. ಅನಂತರ ಕ್ರೀಟಿನ ಇತಿಹಾಸ ಗ್ರೀಸಿನ ಇತಿಹಾಸದ ಭಾಗವಾಗಿದೆ. (ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ